ಶ್ರೀನಿವಾಸರಾವ್ ನಿಟ್ಟೂರು
(1903-2004). ಕರ್ನಾಟಕ (ಮೈಸೂರು) ರಾಜ್ಯದ ನಿವೃತ್ತ ಮುಖ್ಯ ನ್ಯಾಯಾಧೀಶರು. ತಾಯಿ ಸೀತಮ್ಮ, ತಂದೆ ಶಾಮಣ್ಣ ಎ.ವಿ. ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಸೋದರಮಾವ ಸರ್ ಎಂ.ಎನ್.ಕೃಷ್ಣರಾವ್. ಶ್ರೀನಿವಾಸರಾಯರು 1903 ಆಗಸ್ಟ್ 24ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ನಾಲ್ಕು ವರ್ಷದವರಾಗಿದ್ದಾಗ ತಾಯಿಯನ್ನು ಕಳೆದುಕೊಂಡರು.

ಇವರು ಪ್ರಾಥಮಿಕ ಶಿಕ್ಷಣ ಪಡೆದದ್ದು ಹೊಸದುರ್ಗದಲ್ಲಿ, ಅನಂತರ ಚಳ್ಳಕೆರೆ, ಶಿವಮೊಗ್ಗದಲ್ಲಿ ಇವರ ಓದು ಸಾಗಿತು. ಜೊತೆಗೆ ಇವರು ಹಿಂದಿ ಮತ್ತು ಸಂಸ್ಕøತದಲ್ಲೂ ಪ್ರಾವಿಣ್ಯ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್‍ಸಿ. ಪದವಿಗಳಿಸಿದರು. ಅನಂತರ ಮದರಾಸು ವಿಶ್ವವಿದ್ಯಾಲಯದಿಂದ ಕಾನೂನು ಪದವಿಗಳಿಸಿ ವಕೀಲರಾದರು (1927). 1953ರಲ್ಲಿ ಇವರು ಅಡ್ವೋಕೆಟ್ ಜನರಲ್‍ರಾಗಿ ನಿಯುಕ್ತರಾದರು. 1955ರಲ್ಲಿ ಮೈಸೂರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ಬಳಿಕ ಮೈಸೂರು ಹೈಕೋರ್ಟಿನ ನ್ಯಾಯಾಧೀಶರಾಗಿ, 1961ರಲ್ಲಿ ಮುಖ್ಯನ್ಯಾಯಾಧೀಶರಾಗಿ, 1963ರಲ್ಲಿ ನಿವೃತ್ತರಾದರು. ನಿವೃತ್ತಿಗೆ ಮುಂಚೆ, ಕರ್ನಾಟಕದ ಆಗಿನ ರಾಜ್ಯಪಾಲರಾಗಿದ್ದ ಶ್ರೀಜಯಚಾಮರಾಜ ಒಡೆಯರು ವಿದೇಶ ಪ್ರವಾಸದಲ್ಲಿದ್ದಾಗ, ಹಂಗಾಮಿ ರಾಜ್ಯಪಾಲರಾಗಿ ನೇಮಿತರಾಗಿ ಆ ಸ್ಥಾನದಲ್ಲಿದ್ದಾಗಲೇ ನಿವೃತ್ತಿ ಹೊಂದಿದರು. 

ನಿಟ್ಟೂರರು ರಾಜ್ಯಪಾಲರಾಗಿದ್ದಾಗ 1963ನೇ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ರಾಜ್ಯಪಾಲರ ಭಾಷಣವನ್ನು ಕನ್ನಡದಲ್ಲಿ ಮಾಡಿದರು. ಇದರಿಂದ ಪುಳಕಿತರಾದ ಕುವೆಂಪು “ರಾಜ್ಯಪಾಲರಿಗೆ” ಎಂಬ ಕವನವೊಂದನ್ನು ಬರೆದು “ನನ್ನ ಹೊಟ್ಟೆಗೆ ಹಂಡೆ ಹಲು ಹೊಯ್ದಂತಾಯ್ತು ಕನ್ನಡದಿ ಸ್ವಾತಂತ್ರ್ಯ ಸಂದೇಶವನು ನೀವು ಕೊಟ್ಟಿರೆಂಬುದನೋದಿ ಪತ್ರಿಕೆಯೊಳಿಂದು” ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. 

1964ರಲ್ಲಿ ಕೇಂದ್ರ ಸರಕಾರದ ಜಾಗೃತ ಆಯೋಗದ ಪ್ರಥಮ ಆಯುಕ್ತರಾಗಿ ನೇಮಕಗೊಂಡರು. ಆಡಳಿತದಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕಲು ಸಂತಾನಂ ಆಯೋಗದ ಶಿಫಾರಸನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದರು. ಇವರು 1968ರವರೆಗೆ ಈ ಹುದ್ದೆಯಲ್ಲಿದ್ದರು. ಮೊದಲಿನಿಂದಲೂ ಸಾಂಸ್ಕøತಿಕ, ಸಾಮಾಜಿಕ, ರಾಜಕೀಯ, ಚಟುಚಟೆಕೆಗಳಲ್ಲಿ ಅತೀವ ಆಸಕ್ತಿಯಿತ್ತು. ಇವರು ಕಾಂಗ್ರೆಸ್ ಸಂಸ್ಥೆಯ ಸದಸ್ಯರಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಇವರು ಸಕ್ರಿಯರಾಗಿ ದುಡಿದರು. ಜವಾಬ್ದಾರಿ ಸರಕಾರದ ರಚನೆಯ ಹೋರಾಟದಲ್ಲೂ ಇವರು ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಶಾಖೆ ತೆರೆದು ಹಿಂದಿ ಪ್ರಚಾರಕರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿ ಮೈಸೂರು ಸಂಸ್ಥಾನದಲ್ಲಿ ಹಿಂದಿ ಪ್ರಚಾರಕ್ಕೆ ಬುನಾದಿ ಹಾಕಿದರು. ಇವರ ವಕೀಲ ವೃತ್ತಿಯ ಕಛೇರಿಯ ಮೇಲ್ಭಾಗದಲ್ಲೇ ಪ್ರಚಾರಕರ ವಸತಿ ಮತ್ತು ತರಬೇತಿ ಕೇಂದ್ರವಿತ್ತು.

ಮಹಾತ್ಮಾಗಾಂಧೀಜಿಯವರು ಮೂರು ತಿಂಗಳು ಬೆಂಗಳೂರಿನಲ್ಲೂ, ಒಂದೂವರೆ ತಿಂಗಳು ನಂದಿಬೆಟ್ಟದಲ್ಲೂ ಇದ್ದಾಗ, ಇವರು ಗಾಂಧೀಜಿಯವರ ಒಡನಾಟ ಬೆಳೆಸಿಕೊಂಡು, ಅವರು ಹಮ್ಮಿಕೊಂಡ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಖಾದಿ ಪ್ರಚಾರದಲ್ಲಿ ತೊಡಗಿದರಲ್ಲದೆ ಸ್ವತಃ ಖಾದಿಧಾರಿಯಾದರು.

ಸ್ವಾತಂತ್ರ್ಯ ಚಳವಳಿಯ ಸಂದೇಶವನ್ನು ಜನತೆಗೆ ತಲುಪಿಸಬೇಕು, ಗಾಂಧೀಸಾಹಿತ್ಯವನ್ನು ಪ್ರಚಾರ ಮಾಡಬೇಕು. ಕನ್ನಡ ಲೇಖಕರನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಕನ್ನಡದಲ್ಲಿ ಪುಸ್ತಕ ಪ್ರಕಟಣೆ ಶೈಶವಾವಸ್ಥೆಯಲ್ಲಿದ್ದಾಗಲೇ ಇವರು ಸತ್ಯಶೋಧನ ಪ್ರಕಟಣಾಮಂದಿರವನ್ನು ಆರಂಭಿಸಿ (1928) 1967ರ ವರೆಗೆ ಅದನ್ನು ತಮ್ಮ ಮಗ ಚಂದ್ರಶೇಖರರ ಸಹಾಯದಿಂದ ನಡೆಸಿದರು. ಇವರಿಬ್ಬರ ಪರಿಶ್ರಮದಿಂದ ಸತ್ಯಶೋಧನ ಪ್ರಕಟಣಾಮಂದಿರ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಿತು. 1930ರ ದಶಕದ ಮೊದಲಲ್ಲಿ ನಿಟ್ಟೂರರು ಶಿವರಾಮ ಕಾರಂತರ “ಬಾಲಪ್ರಪಂಚ” ಎಂಬ ಶೀರ್ಷಿಕೆಯ ಜ್ಞಾನಕೋಶವನ್ನು ಪ್ರಕಟಿಸಿ ಮೈಸೂರು ಸಂಸ್ಥಾನದ 70 ತಾಲ್ಲೂಕು ಕೇಂದ್ರಗಳಿಗೂ ಹೋಗಿ ಮೂಲೆ ಮೂಲೆಗಳಲ್ಲಿ ತಾವೇ ಸಂಚರಿಸಿ ಗ್ರಾಮಪಂಚಾಯಿತಿಗಳಿಗೆ ತಲುಪಿಸಿದರು. ಈ ಗ್ರಂಥವನ್ನು 60 ಪುಟಗಳ 30 ಸಂಚಿಕೆಗಳಲ್ಲಿ ಹೊರತಂದರು. ಪ್ರತಿತಿಂಗಲೂ ಒಂದು ಸಂಚಿಕೆ ಹೊರ ಬರುತ್ತಿತ್ತು. ಬರೀ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ವಿಜ್ಞಾನ ಪುಸ್ತಕಗಳು ಸಿಗುತ್ತಿದ್ದ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಅದರಲ್ಲೂ ಮಹಿಳೆಯರಿಗೆ ಈ ಜ್ಞಾನ ದೊರಕಬೇಕೆಂಬ ಸದುದ್ದೇಶದಿಂದ ಈ ಕಾರ್ಯವನ್ನು ಮಾಡಿದರು. ಬಿಡುವಿಲ್ಲದ ಕಾರ್ಯನಿರತ ವಕೀಲರಾಗಿದ್ದ, ಶ್ರೀನಿವಾಸರಾಯರು, ಶುಕ್ರವಾರ ಸಂಜೆ ಕೋರ್ಟಿನ ಕೆಲಸ ಮುಗಿದ ನಂತರ, ತಮ್ಮ ಕಾರಿನಲ್ಲಿ ಹೊರಟು, ಗ್ರಾಮಗಳಲ್ಲಿ “ಬಾಲಪ್ರಪಂಚ” ವಿತರಣೆ ಮಾಡಿ, ಭಾನುವಾರ ಸಂಜೆ, ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಈ ಪ್ರಕಟಣಾಲಯದಿಂದ ಅನೇಕ ಸಾಹಿತಿಗಳು ಉತ್ತಮ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳೆವಣಿಗೆಯಲ್ಲಿ ಇವರು ಸಕ್ರಿಯರಾಗಿ ಐವತ್ತಕ್ಕೂ ಹೆಚ್ಚು ವರ್ಷ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿಸಮಿತಿಯ ಸದಸ್ಯರೂ, ಪರಿಷತ್ತಿನ ಮೈಸೂರು ಪ್ರಾಂತಸಮಿತಿಯ ಅಧ್ಯಕ್ಷರೂ ಆಗಿ, 1997ರಲ್ಲಿ ಗುಬ್ಬಿಯಲ್ಲಿ ನಡೆದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇವರು ಸರ್ ಎಂ.ಎನ್.ಕೃಷ್ಣರಾವ್ ಅವರ ಮಗಳು ಪದ್ಮಮ್ಮನವರನ್ನು 1921ರಲ್ಲಿ ಮದುವೆಯಾದರು. ಮೊದಲಿನಿಂದಲೂ ರಾಷ್ಟ್ರೀಯ ಭಾವನೆ ಬೆಳೆಸಿಕೊಂಡ ಈ ದಂಪತಿಗಳು ಮಹಾತ್ಮಾ ಗಾಂಧಿಯವರ ಜೀವನ ಚರಿತ್ರೆ ಮತ್ತು ಗಾಂಧೀಜಿಯವರ ಅನಾಸಕ್ತಿಯೋಗವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಅದರ ಪ್ರತಿಗಳು ಸುಲಭ ಬೆಲೆಯಲ್ಲಿ ಮನೆಮನೆಗೂ ತಲುಪುವಂತೆ ಯತ್ನಿಸಿದರು. ಇವರು ಇಂಗ್ಲಿಷಿನ ಕಥೆಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಸ್ತ್ರೀಯರಿಗಾಗಿ ಒಂದು ಗ್ರಂಥ ಬರೆದಿದ್ದಾರೆ. ಇವರು 1954ರಲ್ಲಿ ಬರೋಡದಲ್ಲಿ ಸೇರಿದ್ದ ಹೊರನಾಡು ಕನ್ನಡ ಸಮ್ಮೇಳನ ಅಧ್ಯಕ್ಷರಾಗಿದ್ದರು. ನ್ಯಾಷನಲ್ ಹೈಸ್ಕೂಲಿನಲ್ಲಿದ್ದಾಗ ಸೇವಾದಳದ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದರು. ಡಿ.ವಿ. ಗುಂಡಪ್ಪನವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಆರಂಭಿಸಿದಂದಿನಿಂದಲೂ ನಿಟ್ಟೂರು ಆ ಸಂಸ್ಥೆಯನ್ನು ಬೆಳೆಸಲು ಹಲವು ಕ್ರಮ ಕೈಗೊಂಡರು. ಈ ಸಂಸ್ಥೆಯ ಕಾರ್ಯದರ್ಶಿಯಾಗಿ (1945-64) ಮತ್ತು (1975-2003) ಮತ್ತು ಸಂಸ್ಥೆಯ ಪೋಷಕರಾಗಿ (2003-2004) ದುಡಿದರು. ನಿರಾಡಂಬರ ವ್ಯಕ್ತಿಯಾಗಿದ್ದ ನಿಟ್ಟೂರರು ಬೆಂಗಳೂರಿನ ಸಭೆ ಸಮಾರಂಭಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು.

ಇವರು ಬೆಂಗಳೂರಿನ ಗಾಂಧಿ ಸ್ಮಾರಕನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ, ಕರ್ನಾಟಕ ಪ್ರಕೃತಿ ಚಿಕಿತ್ಸಾ ಪರಿಷತ್, ಇಂಡಿಯನ್ ನ್ಯಾಷನಲ್ ಸೆಂಟರ್ ಆಫ್ ದಿ ವಲ್ರ್ಡ್ ಯೂನಿಯನ್ ಇಂಟರ್ ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 1954 ಡಿಸೆಂಬರ್‍ನಲ್ಲಿ ಬೆಳಗಾಂವಿಯಲ್ಲಿ ನಡೆದ ಕರ್ನಾಟಕ ವಕೀಲರ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಚಿತ್ತೂರು ಜಿಲ್ಲೆಯ ಲಾ ಕಾನ್‍ಫರೆನ್ಸ್ ಅಧ್ಯಕ್ಷರಾಗಿ 1965ರಲ್ಲಿ ನಿಯುಕ್ತರಾದರು. ಮೊದಲಿನಿಂದಲೂ ಅರವಿಂದಾಶ್ರಮದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಇವರು ಸುಮಾರು 10 ವರ್ಷ ಅಧ್ಯಕ್ಷರಾಗಿದ್ದರು. ಇವರು ಸಂಯುಕ್ತಕರ್ನಾಟಕ ಆರಂಭದ ದಿನಗಳಿಂದಲೂ ಲೋಕ ಶಿಕ್ಷಣ ಟ್ರಸ್ಟಿನ ಸಂಪರ್ಕವಿಟ್ಟುಕೊಂಡಿದ್ದರು. ಅನೇಕ ಬಾರಿ ಇವರು ಟ್ರಸ್ಟಿನ ಅಧ್ಯಕ್ಷರೂ ಆಗಿದ್ದರು.

ಇವರಿಗೆ ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭೆಯ ಗೌರವ ಡಾಕ್ಟರೇಟ್ ಬಂದಿದೆ (1996). ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ಕೊಡುವ ಅತ್ಯುನ್ನತ ಗೌರವ ಡಾಕ್ಟರೇಟ್ ಪದವಿ (ಎಲ್.ಎಲ್.ಡಿ) ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ (1997).

ಇವರು ಅಮೇರಿಕ, ಯುರೋಪ್, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. 2001ರಲ್ಲಿ ಮಾಂಚೆಸ್ಟರ್‍ನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಇವರು ಭಾಗವಹಿಸಿದ್ದರು. 

ಬೆಂಗಳೂರಿನ ಸಾರ್ವಜನಿಕ ಸೇವಾಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು 2004 ಆಗಸ್ಟ್ 12ರಂದು ನಿಧನರಾದರು. 	
		
									(ಎಸ್.ಎಂ.ಕೆ) 
(ಪರಿಷ್ಕರಣೆ: ಎನ್.ಎಸ್. ಸುಬ್ಬಣ್ಣ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ